“ಕಣ್ಣು ಕಾಣದೆ ಇದ್ದರೆ ಜೀವನ ಕೊನೆ ಅಲ್ಲ”

ಕಣ್ಣು ಕಾಣದೆ ಇದ್ದರೆ, ಶ್ರವಣ ಕಳೆದುಕೊಂಡರೆ ನಮ್ಮ ಜೀವನ ಮುಗಿಯಿತು ಎಂದು ಹತಾಶೆಯಾಗಿ ಖಿನ್ನತೆಯಿಂದ ಬಳಲುವವರೆ ಹೆಚ್ಚು. ಬಹುಶಃ ಸಾಧಕರ ವಿಚಾರದಲ್ಲಿ ಇದು ತಪ್ಪಾಗಬಹುದು. ದೇಹದ ಅಂಗಾಂಗದ ಊನ ಅವರ ಸಾಧನೆಗೆ ಅಡ್ಡಿಯಾಗುವುದಿಲ್ಲ. ತಮ್ಮ ನೋವಿನಲ್ಲೂ ಅಗಾಧವಾದ ಶಕ್ತಿಯಿದೆ ಎಂದು ಕೆಲವು ಸಾಧಕರು ನಿರೂಪಿಸಿದ್ದು ಉಂಟು. ಇಂದು ಅಂತಹ ಸಾಧಕರೊಬ್ಬರಾದ ಜೀನ್ ಬ್ಯಪ್ಟಿಸ್ಟ್ ಜೋಸೆಫ್ ಡೆಲಾಂಬ್ರೆ ಪರಿಚಯ ಮಾಡಿಕೊಳ್ಳುವ ಪ್ರಯತ್ನ ಮಾಡೋಣ.

ಡೆಲಾಂಬ್ರೆ 15ರ ಪ್ರಾಯದ ಹುಡುಗ, ಮನೆಗೆ ಹಿರಿಯ ಮಗ. ತಾನಿದ್ದ ಪ್ರದೇಶದಲ್ಲಿ ಸಿಡುಬಿನ ಕಾಯಿಲೆ ಮಾರಣಾಂತಿಕವಾಗಿ ಆವರಿಸಿತ್ತು. ಆರೋಗ್ಯ ಹದಗೆಟ್ಟಿತ್ತು. ಜ್ವರದಿಂದ ಬಳಲುತ್ತಿದ್ದ ಆ ಹುಡುಗನ ಕಣ್ಣುಗಳಿಗೆ ಅತಿ ಸೂಕ್ಷ್ಮವಾಗಿ ಅಂಧಕಾರ ಆವರಿಸತೊಡಗಿತ್ತು. ಕಣ್ಣ ರೆಪ್ಪೆಗಳು ಉದುರಿದವು. ಈ ಹುಡುಗನ ಭವಿಷ್ಯದ ಬಗ್ಗೆ ಪೋಷಕರಲ್ಲಿ ಆತಂಕ ಮನೆ ಮಾಡಿತ್ತು. ಈತ ಅತಿ ಶೀಘ್ರದಲ್ಲೆ ಕುರುಡನಾಗುತ್ತಾನೆ ಎಂದು ಹೆತ್ತವರು ನಂಬಿದ್ದರು. ಕಣ್ಣು ಕಾಣದೆ ಓದುವ ಸಾಮಥ್ರ್ಯ ಕಳೆದುಕೊಳ್ಳುವ ಭಯದಿಂದ ಡೆಲಾಂಬ್ರೆ ಲಭ್ಯವಿರುವ ಯಾವ ಪುಸ್ತಕವನ್ನೂ ಬಿಡದೆ ಓದುವ ಮತ್ತು ಮನನ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದ. ಈ ಪ್ರಯತ್ನ ಆತನಿಗೆ ಗ್ರೀಕ್ ಮತ್ತು ಲ್ಯಾಟಿನ್ ಸಾಹಿತ್ಯದಲ್ಲಿ ಹಿಡಿತ ಸಾಧಿಸುವಂತೆ ಮಾಡಿತ್ತು. ಆತನ 20ನೇ ವಯಸ್ಸಿನಲ್ಲಿ ದೃಷ್ಟಿ ಎಷ್ಟು ಕ್ಷೀಣಿಸಿತ್ತೆಂದರೆ ಆತ ತನ್ನ ಕೈಬರಹವನ್ನೆ ಸ್ಪಷ್ಟವಾಗಿ ಓದಲು ಆಗುತ್ತಿರಲಿಲ್ಲ. ಸೂರ್ಯನ ಬೆಳಕು ಆತನ ಕಣ್ಣುಗಳಿಗೆ ಹಿಂಸೆ ಕೊಡುತ್ತಿದ್ದವು. ಇಂತಹ ಪರಿಸ್ಥಿತಿಯಲ್ಲೂ ಖಗೋಳಶಾಸ್ತ್ರವನ್ನು ತನ್ನ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಗಮನಾರ್ಹ.

moon

1771 ರಲ್ಲಿ ಡೆಲಾಂಬ್ರೆ ಪ್ಯಾರಿಸ್ ನ ಪ್ರತಿಷ್ಟಿತ ವ್ಯಕ್ತಿ ಜೆಫ್‍ರಾಯ್ ಡಿ ಅಸ್ಸಿ ರವರ ಮಗನಿಗೆ ಪಾಠ ಹೇಳುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಆ ಸಮಯದಲ್ಲಿ ಡೆಲಾಂಬ್ರೆಯ ಆಸಕ್ತಿ ಗ್ರೀಕ್ ಸಾಹಿತ್ಯದಿಂದ ಗ್ರೀಕ್‍ನ ಖಗೋಳ ವಿಜ್ಞಾನದ ಕಡೆಗೆ ಹೊರಳಿತು. 1778ರಲ್ಲಿ ಡೆಲಾಂಬ್ರೆ ಸೂರ್ಯನ ಮುಂದೆ ಬುಧಗ್ರಹದ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸತೊಡಗಿದರು. ಆ ಸಮಯದಲ್ಲಿ ಹೆಚ್ಚು ಮೋಡ ಆವರಿಸಿ ಬುಧನ ಚಲನೆ ಕಾಣದಾಯಿತು. ಇದರಿಂದ ಬಹಳಷ್ಟು ಖಗೋಳ ವಿಜ್ಞಾನಿಗಳು ನಿರಾಸೆಯಿಂದ ವೀಕ್ಷಣೆಯ ಕೆಲಸವನ್ನು ಅರ್ಧದಲ್ಲೇ ಕೈ ಬಿಟ್ಟರು. ಆದರೆ ಡೆಲಾಂಬ್ರೆ ತನ್ನ ವೀಕ್ಷಣೆಯನ್ನು ಮುಂದುವರೆಸಿದರು. ಈ ಹಿಂದೆ ಡೆಲಾಂಬ್ರೆ ಅವರ ಗುರುಗಳಾದ ಲಲಾಂಡೆಯವರು, ಬುಧಗ್ರಹವು ಸೂರ್ಯನ ಮುಂದೆ ಚಲಿಸಲು ಇಂತಿಷ್ಟೆ ನಿರ್ದಿಷ್ಟ ಸಮಯ ತೆಗೆದುಕೊಳ್ಳುವುದು ಎಂದು ಕೋಷ್ಟಕಗಳನ್ನು ಹಾಕಿದ್ದರು. ಆದರೆ ಡೆಲಾಂಬ್ರೆಗೆ ಈ ಕೋಷ್ಟಕಗಳ ಮೇಲೆ ನಂಬಿಕೆ ಇರಲಿಲ್ಲ. ಲಲಾಂಡೆಯವರು ಹೇಳಿರುವುದಕ್ಕಿಂತ ಹೆಚ್ಚಿನ ಸಮಯ ಬುಧಗ್ರಹ ಸೂರ್ಯನ ಮುಂದೆ ಹಾದು ಹೋಗಲು ತೆಗೆದುಕೊಂಡಿತ್ತು. ಈ ಸಂದರ್ಭ ಡೆಲಾಂಬ್ರೆಯವರಿಗೆ ಇನ್ನಷ್ಟು ನಿಖರವಾದ ಕೋಷ್ಟಕಗಳನ್ನು ತಯಾರಿಸಲು ಪ್ರೇರಣೆಯಾಯಿತು.

1788 ರಲ್ಲಿ ಡಿ’ಅಸ್ಸಿಯವರಿಂದ ಡೆಲಾಂಬ್ರೆಯವರಿಗಾಗಿ ವೀಕ್ಷಣಾಲಯವೊಂದನ್ನು ನಿರ್ಮಿಸಲಾಯಿತು. ಅಲ್ಲಿ ಎಡೆಬಿಡದೆ ಸೂರ್ಯ, ಗುರು, ಶನಿ, ಯುರೇನಸ್ ಮತ್ತು ಗುರುವಿನ ಉಪಗ್ರಹಗಳನ್ನು ವೀಕ್ಷಿಸಿದ ಅವರು ಅದರ ಸಂಬಂಧ ಕೋಷ್ಟಕಗಳನ್ನು ತಯಾರಿಸಿದರು. ಈ ಕೋಷ್ಟಕಗಳು ಖಗೋಳ ವೀಕ್ಷಕರಿಗೆ ಹಾಗೂ ಗ್ರಹಗಳ ಬಗ್ಗೆ ಅಧ್ಯಯನ ಮಾಡುವವರಿಗೆ ಮಾರ್ಗದರ್ಶಕವಾಗುತ್ತದೆ ಎಂದರೆ ಅತಿಶಯೋಕ್ತಿಯಲ್ಲ.

a

ಖಗೋಳಶಾಸ್ತ್ರದಲ್ಲಿ ಡೆಲಾಂಬ್ರೆಯವರ ಗ್ರಹಗಳ ಚಲನ ವೀಕ್ಷಣಾ ಅಧ್ಯಯನವು ಇಂದಿಗೂ ಮೈಲಿಗಲ್ಲಾಗಿ ಉಳಿದುಕೊಂಡಿದೆ.

ಚಂದ್ರನ ಮೇಲ್ಮೈ ಹಲವಾರು ವೃತ್ತಾಕಾರದ ರಂದ್ರಗಳಿಂದ ಕೂಡಿದೆ. ಹಲವಾರು ಕ್ಷುದ್ರ ಗ್ರಹಗಳು ಚಂದ್ರನ ಮೇಲ್ಮೈಗೆ ಅಪ್ಪಳಿಸಿದಾಗ ಈ ತರಹದ ರಂದ್ರಗಳು ಚಂದ್ರನಲ್ಲಿ ಉಂಟಾಗಿದೆ. ಈ ರಂದ್ರಗಳಿಗೆ ಖಗೋಳ ವಿಜ್ಞಾನದಲ್ಲಿ ಕೆಲಸ ಮಾಡಿರುವ ಮಹಾನ್ ಸಾಧಕರ ಹೆಸರಿಡುವ ಪಧ್ಧತಿ 1651 ರಲ್ಲಿ ಶುರುವಾಗಿ ಇಂದಿಗೂ ನಡೆದುಕೊಂಡು ಬಂದಿದೆ. 1935 ರಲ್ಲಿ ಡೆಲಾಂಬ್ರೆ ಅವರ ಸಾಧನೆಗೆ ಗೌರವ ಸೂಚಿಸಿ ಅವರ ಹೆಸರನ್ನು ಚಂದ್ರನ ಒಂದು ಕುಳಿಗೆ ಇಡಲಾಯಿತು. ಡೆಲಾಂಬ್ರೆ ಕುಳಿಯು 52 ಕಿ.ಮೀ. ವ್ಯಾಸ ಹಾಗೂ 3.5 ಕಿ.ಮೀ. ಆಳ ಇದೆ.

ಲೇಖಕರು,
ಕೃಷ್ಣ ಚೈತನ್ಯ ,
ಗಣಿತ ಉಪನ್ಯಾಸಕರು,ತುರುವೇಕೆರೆ.


NEST PUBLICATIONS(R.)

Karnataka’s Best Publication for NEET and KCET Materials.



error: Content is protected !!