“ವಿಶ್ವ ಅದ್ಬುತ : ಅಂಕಿಗಳಿಂದಲೇ ರಚಿಸಲ್ಪಟ್ಟ ಮಹಾಗ್ರಂಥ”

ಒಂದು ಮಹಾನ್ ಗ್ರಂಥ ಎಂದರೆ ಯಾವುದಾದರೋ ಭಾಷೆಯಲ್ಲಿಯೇ ಇರಬೇಕು , ಒಂದು ನಿರ್ದಿಷ್ಟವಾದ ಲಿಪಿ ಇರಲೇಬೇಕು ಅಲ್ಲವೆ? ಕೇವಲ ಕನ್ನಡದ ಅಂಕಿಗಳನ್ನು ಬಳಸಿದ ಲಿಪಿರಹಿತ ಮಹಾಕಾವ್ಯ ಎಂಬುದು ಒಂದಿದೆ ಎಂದರೆ ನಂಬುತ್ತೀರಾ? ನಂಬಲೇಬೇಕು. ಕನ್ನಡಿಗರು ಹೆಮ್ಮೆ ಪಡುವಂತಹ ಇತಿಹಾಸ ಗರ್ಭದಲ್ಲಿ ಅಡಗಿರುವ ಕನ್ನಡದ ಕೌತುಕದ ಸೃಷ್ಟಿ ಅದುವೇ “ಸಿರಿಭೂವಲಯ”. ಇದರ ನಿರ್ಮಾತೃ ಗಣಿತಜ್ಞ ಕವಿ “ಕುಮುದೇಂದು ಮುನಿ”. ಇವರ ಜೀವಿತಾವಧಿಯ ಕಾಲದ ಬಗ್ಗೆ ನಿಖರವಾದ ಮಾಹಿತಿ ಇಲ್ಲವಾದರೂ ಹನ್ನೆರಡರಿಂದ ಹದಿನಾರನೇ ಶತಮಾನದಲ್ಲಿದ್ದಿರಬಹುದೆಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.

mat

ಈಗ ಸಿರಿ ಭೂವಲಯದ ಪುಸ್ತಕದ ಕಡೆಗೆ ಬರುವುದಾದರೆ. ಇದೊಂದು ಲಿಪಿರಹಿತ ಅತೀ ಅಪರೂಪದ ಅಂಕಿಕಾವ್ಯ. ಕುಮುದೇಂದು ಮುನಿಯಿಂದ ವಿರಚಿತವಾದ ‘ಸಿರಿಭೂವಲಯ’ 56 ಅಧ್ಯಾಯಗಳ ಒಂದು ಜೈನ ಸಿದ್ದಾಂತ ಗ್ರಂಥ. ಗ್ರಂಥ ಎಂದ ಮಾತ್ರಕ್ಕೆ ಇದು ನಮಗೆ ಪರಿಚಿತವಾದ ರೀತಿಯಲ್ಲಿರುವ ಗ್ರಂಥವಲ್ಲ. ಒಂದು ಭಾಷೆಯಲ್ಲಿರುವ ವರ್ಣಮಾಲೆಯನ್ನು ಬಳಸಿ ಪದಗಳನ್ನು ಹೆಣೆದು ಲಿಪಿಬದ್ದಗೊಳಿಸಿದ ಗ್ರಂಥವಲ್ಲ. ಬದಲಾಗಿ ಗಣಿತದಲ್ಲಿ ಬಳಸುವಂತಹ ಸಂಖ್ಯಾ ಲಿಪಿಗಳನ್ನು , ಎಂದರೆ ಕನ್ನಡದ ಅಂಕಿಗಳನ್ನು ಮಾತ್ರ ಬಳಸಿ ಸಿದ್ದಪಡಿಸಿದ ಗ್ರಂಥ. ಈ ಅಂಕಿಗಳನ್ನು (ಕನ್ನಡದ 1 ರಿಂದ 64 ಅಂಕಿಗಳನ್ನು) ಅಕ್ಷರ ಸ್ಥಾನದಲ್ಲಿ, ಅವುಗಳಿಗೆ ಪ್ರಥಿನಿಧಿಗಳಾಗಿ, ಪ್ರತಿರೋಪಗಳಾಗಿ ಬಳಸಿರುವುದೇ ಈ ಗ್ರಂಥದ ವೈಶಿಷ್ಟ್ಯ. ಆಯಾ ಅಕ್ಷರಗಳಿಗೆ ಗೊತ್ತಾದ ಅಂಕಗಳನ್ನು 729 ಚೌಕದ ಮನೆಗಳಲ್ಲಿ (Matrix of order 27 X 27) ತುಂಬಿರಿಸಿದ ಅಂಕರಾಶಿಯ ಚಕ್ರಗಳೇ ಇಲ್ಲಿಯ ಪುಟಗಳು.

27 ಸ್ವರ, 25 ವ್ಯಂಜನ, 8 ಯೋಗವಾಹ ಮತ್ತು 4 ಅಯೋಗವಾಹ. ಈವೆಲ್ಲಾ ಸೇರಿ ಒಟ್ಟು 64 ಅಕ್ಷರಗಳನ್ನು ನವಮಾಂಕ ವಿಧಾನದಲ್ಲಿ ನೆಲೆಗೊಳಿಸಿದರೆ ಇಲ್ಲಿನ ಕಾವ್ಯ ಪಂಕ್ತಿಗಳು ಕಂಗೊಳಿಸುತ್ತವೆ. ಇಲ್ಲಿ ಬಳಸಲಾಗಿರುವುದು ‘ಸಾಂಗತ್ಯ’ ಎಂಬ ಕನ್ನಡದ ಛಂದಸ್ಸು. ಕುಮುದೇಂದು ಕವಿಯೇ ಇದನ್ನು ಅಂಕಕಾವ್ಯ (‘ವಿಮಲಾಂಕ ಕಾವ್ಯ’ ಭೂವಲಯ 8-9) ಎಂದು ಕರೆದಿದ್ದ್ದಾನೆ ಎಂಬುದಾಗಿ ಇಂದು ನಮಗೆ ಲಬ್ಯವಿರುವ ಪುಸ್ತಕ ರೂಪದಲ್ಲಿರುವ ಸಿರಿ ಭೂವಲಯದ ಪ್ರಧಾನ ಸಂಪಾದಕರಾದ ಡಾ|| ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು ತಿಳಿಸಿದ್ದಾರೆ.

ಈ ಗ್ರಂಥದಲ್ಲಿ ಮೂಲ ವಿಜ್ಞಾನ ವಿಷಯಗಳು, ದರ್ಶನಗಳ ತಾತ್ವಿಕ ವಿಚಾರಗಳು, ರಸಾಯನ ಶಾಸ್ತ್ರ, ಜ್ಯೋತಿಷ್ಯ, ವೈದ್ಯ , ಅಣು ವಿಜ್ಞಾನ, ಖಗೋಳ ವಿಜ್ಞಾನ, ಗಣಿತ, ಇತಿಹಾಸ, ವೇದ ಭಗವದ್ಗೀತೆಗಳ ಅವತರಣಿಕೆಗಳು ಮತ್ತು ಹಲವು ವಿಚಾರಗಳು ಹುದುಗಿದೆ ಎಂದು ಗ್ರಂಥ ಸಂಪಾದಕರು ಮತ್ತು ವಿಮರ್ಷಕ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಈ ಗ್ರಂಥವನ್ನು ರಚಿಸಿದ ಕವಿಯೇ ಇದನ್ನು ಸರ್ವಭಾಷಾಮಯಿ ಕರ್ಣಾಟಕ ಕಾವ್ಯ ಎಂದು ಕರೆದಿದ್ದಾರೆ. 56 ಅಧ್ಯಯಗಳಿರುವ ಈ ಗ್ರಂಥದಲ್ಲಿ 718 ಭಾಷೆಗಳು ಒಳಗೊಂಡಿದೆ ಎಂದು ಕುಮುದೇಂದುವೇ ಹೇಳಿದ್ದಾರೆ. ಇದನ್ನು ಸಾಕ್ಷೀಕರಿಸಲು ಇದರಲ್ಲಿರುವ ಇಂದು ಪದ್ಯ ಹೀಗಿದೆ,

ಹದಿನೆಂಟು ಭಾಷೆಯು ಮಹಾಭಾಷೆಯಾಗಲು | ಬದಿಯ ಭಾಷೆಗಳೇಳ್ನೂರಂ

ಹೃದಯದೊಳಡಗಿಸಿ ಕರ್ಮಾಟಲಿಪಿಯಾಗಿ | ಹುದುಗಿಸಿದಂಕ ಭೂವಲಯ ||

718 ಭಾಷೆಗಳು (18 ಮಹಾಭಾಷೆಗಳು + 700 ಸಣ್ಣ ಸಣ್ಣ ಭಾಷೆಗಳು). ಈ ಭಾಷೆಗಳಿಗೆಲ್ಲಾ ಆಧಾರವಾದ ಭಾಷೆಯೂ ಲಿಪಿಯೂ ಆಗಿರುವಂತೆ ಸ್ವಬಾಷೆಯಾದ ಕನ್ನಡವನ್ನು ಕವಿಯು ಆರಿಸಿಕೊಂಡಿದ್ದಾರೆ. ಇಲ್ಲಿ ಕನ್ನಡದ ಅಂಕಿಗಳನ್ನು ನವಮಾಂಕ ಪದ್ದತಿ / ಚಕ್ರ ಬಂಧ ವಿಧಾನದಲ್ಲಿ ಚಮತ್ಕಾರಪೂರ್ವಕವಾಗಿ ಗ್ರಂಥರಚನೆ ಮಾಡಿದ್ದಾರೆ. ಗ್ರಂಥ ತನ್ನ ಒಡಲಲ್ಲಿ ಅನೇಕ ಭಾಷೆಗಳನ್ನು ಹುದುಗಿಸಿಕೊಂದಿದ್ದರೂ ಅನೇಕ ವಿಧದ ಭಾಷಾ ಚಿತ್ರಗಳನ್ನೂ, ಬಂಧ ಚಿತ್ರಗಳನ್ನೂ ಪ್ರಕಟಪಡಿಸುವಂತಿದ್ದರೂ ರಚನೆಗೆ ಆಧಾರವಾಗಿ ಬಳಸಿರುವ ಮುಖ್ಯ ಛಂದಸ್ಸು ಪ್ರಕಾರವೆಂದರೆ, ಕನ್ನಡ ಭಾಷೆಯ ನಡುಗನ್ನಡ ಕಾಲದ ಸಾಹಿತ್ಯ ಕೃತಿಗಳಿಗೆ ಬಳಸಿರುವ ಬಹುಪರಿಚಿತವಾದ ಸಾಂಗತ್ಯವೆಂಬ ಅಚ್ಚಕನ್ನಡ ಛಂದಸ್ಸು. ಈ ವಿಷಯವನ್ನು ಕವಿಯೇ ಬೇರೆ ಬೇರೆ ಪದ್ಯಗಳಲ್ಲಿ ಹೇಳಿದ್ದಾರೆ. 718 ಭಾಷೆಗಳನ್ನು ಕನ್ನಡ ಕಾವ್ಯದಲ್ಲಿ ಅಳವಡಿಸಲು ಕೆಲವು ಬಂಧಗಳನ್ನು ಇಲ್ಲಿ ಉಪಯೋಗಿಸಿದ್ದಾರೆ.

ಶ್ರೇಣಿ ಬಂಧದಲ್ಲಿ ಬಂದಿರುವ ಕನ್ನಡ ಕಾವ್ಯದ ಮೊದಲ ಅಕ್ಷರಗಳನ್ನು ಮೇಲಿನಿಂದ ಕೆಳಕ್ಕೆ ಓದುತ್ತಾ ಹೋದರೆ ಅದು ಪ್ರಾಕೃತ ಕಾವ್ಯವಾಗುವುದು. ನಡುವಿನ 27ರ ಅಕ್ಷರದಿಂದ ಕೆಳಕ್ಕೆ ಓದಿದರೆ ಸಂಸ್ಕೃತ ಕಾವ್ಯವಾಗುವುದು. ಈ ರೀತಿಯಲ್ಲಿ ಬಂಧಗಳನ್ನು (ಚಕ್ರ) ಬೇರೆ ಬೇರೆ ರೀತಿಯಲ್ಲಿ ನೋಡುತ್ತಾ ಹೋದರೆ ವಿವಿಧ ಬಂಧಗಳಲ್ಲಿ ಬಹುವಿಧವಾದ ಭಾಷೆಗಳು ಬರುವುದೆಂದು ಕವಿಯು ಹೇಳುತ್ತಾರೆ. ಕವಿಯು ಹೆಸರಿಸಿದ ಕೆಲವು ಬಂಧಗಳು ಹೀಗಿದೆ : ಚಕ್ರ ಬಂಧ, ಹಂಸ ಬಂಧ, ಪದ್ಮ, ಶುದ್ಧ ನವಮಾಂಕ ಬಂಧ, ವರಪದ್ಮ, ದ್ವೀಪ, ಸಾಗರ, ಪಲ್ಯ, ಅಂಬು ಬಂಧ, ಸರಸ, ಶಲಾಕ, ಅಂಕ, ಲೋಕ, ಇತ್ಯಾದಿ.
ಸಿರಿ ಭೂವಲಯದಲ್ಲಿನ ಒಂಭತ್ತರ ವಿಶೇಷ : 27 ನಕ್ಷತ್ರಗಳು ನಮ್ಮ ನಭೋ ಮಂಡಲದಲ್ಲಿದೆ. ಕಾಕತಾಳಿಯ ಎಂಬಂತೆ ಸಿರಿಭೂವಲಯದಲ್ಲೂ 27 ಚಕ್ರದ ಮನೆಗಳಿವೆ. 2 ಮತ್ತು 7 ಕೂಡಿಸಿದರೆ 9 ಬರುತ್ತದೆ. ಹಾಗೆಯೇ ಒಟ್ಟು ಮನೆಗಳ ಸಂಖ್ಯೆ 27 X 27 = 729. ಇಲ್ಲಿ 7+2+9=18 -> 1+8=9, ಕೊನೆಗೆ ಒಂಭತ್ತೇ ಬರುತ್ತದೆ. ಪ್ರತಿಯೊಂದು ಭೂವಲಯದ ಅಧ್ಯಾಯಗಳಲ್ಲಿ ಬರುವ ಅಕ್ಷರ ಸಂಖ್ಯೆ ಕೂಡಿಸಿದಲ್ಲಿ ಅದೂ ಸಹ 9 ರಲ್ಲಿಯೇ ಮುಕ್ತಾಯವಾಗುತ್ತದೆ. ಇದೂ ಕೂಡ ಒಂದು ಗಣಿತಾತ್ಮಕ ಚಮತ್ಕಾರ.

ಈ ಗ್ರಂಥದ ಮತ್ತೊಂದು ವಿಶೇಷತೆ ಅಂದರೆ , ನಾವು ಇಂದು ಕನ್ನಡ ಭಾಷೆಯಲ್ಲಿ ಬಳಸುತ್ತಿರುವ ಪೂರ್ಣಾಕ್ಷರ ಕ್ರಮವು ಇಲ್ಲಿ ಬಳಕೆಯಲ್ಲಿಲ್ಲ. ಉದಾಹರಣೆಗೆ ಕನ್ನಡ ಎಂಬ ಶಬ್ದವನ್ನು ‘ ಕ್ ಅನ್ ನ್ ಅಡ್ ಅ’ ಎಂದು ಬರೆದುಕೊಂಡು ಅದನ್ನು ಕನ್ನಡ ಎಂದು ಓದಬೇಕು. ಇಂದಿನ ದಿನಮಾನದಲ್ಲಿ ಇಂಗ್ಲಿಷ್ ಪದಗಳನ್ನು ಮಕ್ಕಳಿಗೆ ಕಲಿಸಲು PHONICS ವಿಧಾನವನ್ನು ಅನುಸರಿಸುತ್ತಿದ್ದೇವೆ. PHONICS ಅನ್ನು ನಾವು ಉಪಯೋಗಿಸಲು ಪ್ರಾರಂಭ ಮಾಡಿದ್ದು 19ರ ದಶಕದಲ್ಲಿ, ಆದರೆ ಕನ್ನಡದ ಮನಸೊಂದು 12-14 ದಶಕದಲ್ಲಿಯೇ ಕನ್ನಡದಲ್ಲಿ PHONICS ಅನ್ನು ಬಳಸುತ್ತಿತ್ತು ಅಂದರೆ ನಮ್ಮ ಕನ್ನಡದ ಬಗ್ಗೆ ಹೆಮ್ಮೆ ಅನ್ನಿಸುವುದು ಸಹಜವೆ. ಈ ಗ್ರಂಥ ನಮ್ಮ ಕನ್ನಡದ ಅಪರೂಪದ ಕೃತಿ. ಇದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ಕೊಡುವುದು ನಮ್ಮ ಕರ್ತವ್ಯವಾಗಿದೆ.

ಲೇಖಕರು ,
ಕೃಷ್ಣ ಚೈತನ್ಯ ,

ಗಣಿತ ಉಪನ್ಯಾಸಕರು,ತುರುವೇಕೆರೆ.


NEST PUBLICATIONS(R.)

Karnataka’s Best Publication for NEET and KCET Materials.



error: Content is protected !!