ಕನ್ನಡದ ಮೊದಲ ಶಾಸನ: ತಾಳಗುಂದದ ಸಿಂಹಕಟಿ ಶಾಸನ. ಕನ್ನಡದ ಮೊದಲ ಕೃತಿ: ಕವಿರಾಜ ಮಾರ್ಗ. ಕನ್ನಡದ ಮೊದಲ ಗದ್ಯ ಕೃತಿ: ವಡ್ಡಾರಾದನೆ, ಕನ್ನಡದ ಮೊದಲ ಕಾವ್ಯ ಕೃತಿ: ಆದಿಪುರಾಣ. . . . . ಹೀಗೆ ಕನ್ನಡದ ಹಲವಾರು ಪ್ರಥಮಗಳನ್ನು ನೋಡುತ್ತಿರುವಾಗ ಗಣಿತದ ವಿಧ್ಯಾರ್ಥಿಯಾದ ನನಗೆ ಕನ್ನಡದ ಮೊದಲ ಗಣಿತ ಕೃತಿ ಯಾವುದು? ಎಂಬ ಕುತೂಹಲ ಸಹಜವಾಗೆ ಮೂಡಿತು. ಸರಿ ಆ ಕುತೂಹಲದ ಬೆನ್ನಟ್ಟಿ ಹೊರಟಿದ್ದಾಯಿತು. ಮೊದಲಿಗೆ ನಮ್ಮ ಗೂಗಲ್ ಗುರುವನ್ನು ಕೇಳಿದಾಗ ತೃಪ್ತಿದಾಯಕ ಉತ್ತರ ತಿಳಿಯಲಿಲ್ಲ. ನಂತರ ಹಲವಾರು ಪುಸ್ತಕಗಳನ್ನು ತಡಕಿದ್ದಾಯಿತು. ಕೊನೆಗೆ ಗುರುಗಳಾದ ಡಾ|| ಎಸ್. ಬಾಲಚಂದ್ರರಾವ್ ಅವರಿಂದ ಕನ್ನಡದ ಮೊದಲ ಗಣಿತ ಗ್ರಂಥದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿತು. ಮಾಹಿತಿ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಹಿರಿಯರ ಅನುಭವಕ್ಕೆ ಸರಿಸಾಟಿಯಿಲ್ಲ ಎಂದು ತಿಳಿಯಿತು.

ಕನ್ನಡದಲ್ಲಿ ಗಣಿತ ಗ್ರಂಥವನ್ನು ಮೊದಲಿಗೆ ಬರೆದ ಗಣಿತಜ್ಞ ರಾಜಾದಿತ್ಯ, ಅವನ ಕೃತಿ ವ್ಯವಹಾರ ಗಣಿತ. ಈ ಪುಸ್ತಕದ ಪ್ರತಿಗಳು ಚೆನ್ನೈ ನ ಪ್ರಾಚ್ಯ ಹಸ್ತಲಿಖಿತ ಭಂಡಾರದಲ್ಲಿ ದೊರೆತಿದ್ದು ಅದನ್ನು ಪ್ರೊ.ಎಂ.ಮರಿಯಪ್ಪ ಭಟ್ಟರು ಅಲ್ಲಿಯ ಸರ್ಕಾರದ ವತಿಯಿಂದ 1955 ರಲ್ಲಿ ಪ್ರಕಟಿಸಿದ್ದಾರೆ. ನಂತರ 2013 ರಲ್ಲಿ ಮೈಸೂರಿನ ಡಾ|| ಪದ್ಮಾವತಮ್ಮ, ಶ್ರೀಮತಿ ಕೃಷ್ಣವೇಣಿ ಹಾಗೂ ಶ್ರೀ ಕೆ.ಜಿ.ಪ್ರಕಾಶ್ ರವರು ಕನ್ನಡ ಮತ್ತು ಇಂಗ್ಲೀಷ್ ಎರಡರಲ್ಲೂ ಇರುವಹಾಗೆ “ಶ್ರೀ ರಾಜಾದಿತ್ಯ ವಿರಚಿತ ವ್ಯವಹಾರ ಗಣಿತ ಮತ್ತು ಲೀಲಾವತಿ” ಎಂಬ ಶೀರ್ಷಿಕೆಯಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಇಲ್ಲಿ ಪ್ರಕಾಶಕರು ಮತ್ತು ಅನುವಾದಕರು ಮೂಲದಲ್ಲಿ ಇದ್ದ ಹಳೆಗನ್ನಡವನ್ನು ಸುಲಲಿತವಾದ ಹೊಸಗನ್ನಡದಲ್ಲಿ ಮತ್ತು ಇಂಗ್ಲೀಷ್‍ನಲ್ಲಿ ಗಣಿತ ವಿವರಗಳ ಸಹಿತ ಶಾಲಾಮಕ್ಕಳಿಗೂ ತಿಳಿಯುವಹಾಗೆ ಅನುವಾದಿಸಿದ್ದಾರೆ.
ರಾಜಾದಿತ್ಯನು ಒಬ್ಬ ಜೈನ ಗಣಿತಜ್ಞನಾಗಿದ್ದು ಕ್ರಿ.ಶ 1190 ರ ಸುಮಾರಿನಲ್ಲಿ ಜೀವಿಸಿದ್ದನು ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆತ ಜೀವಿಸಿದ್ದ ಸ್ಥಳ ನಿರ್ದಿಷ್ಟವಾಗಿ ತಿಳಿಯದಿದ್ದರೂ ಆತನ ಕೆಲವು ಪದ್ಯದ ಸಾಲುಗಳಲ್ಲಿ ಪೂವಿನಬಾಗೆ ಎಂಬ ಪ್ರದೇಶಗಳನ್ನು ವರ್ಣಮಯವಾಗಿ ವರ್ಣಿಸಿದ್ದಾನೆ. ಆ ಪ್ರದೇಶ ಇಂದಿನ ಉತ್ತರ ಕರ್ನಾಟಕದ ಹೂವಿನ ಹಡಗಲಿ ಹಾಗೂ ಬಸವನಬಾಗೆವಾಡಿಗೆ ಹೋಲುತ್ತದೆ. ಆತನ ಆರಾದ್ಯದೈವ ನೇಮಿ ತೀರ್ಥಂಕರರು, ಗುರು ಶುಭಚಂದ್ರ, ತಂದೆ ಶ್ರೀಪತಿ ಹಾಗೂ ತಾಯಿ ವಸಂತ ಎಂದು ತಿಳಿದುಬರುತ್ತದೆ. ರಾಜಾದಿತ್ಯನ ಗಣಿತ ಕೃತಿಗಳು ಹೆಚ್ಚಾಗಿ ಕಾವ್ಯರೂಪದಲ್ಲಿದ್ದು ಇದು ಆತನ ಗಣಿತ ಜಾಣ್ಮೆಯ ಜೊತೆಗೆ, ಕವಿತಾ ಪ್ರೌಡಿಮೆಯನ್ನು ತೋರಿಸುತ್ತದೆ.
ವ್ಯವಹಾರ ಗಣಿತವು ಪುರಾತನ ಕಾಲದ ವ್ಯವಹಾರಕ್ಕೆ ಸಂಬಂಧಿಸಿದ್ದ ಅಂಕಗಣಿತವಾದರೂ ಇಂದಿಗೂ ಕೂಡ ಪ್ರಸ್ತುತವಾಗಿದೆ. ಇದು ಎಂಟು ಅಧ್ಯಾಯಗಳನ್ನು ಒಳಗೊಂಡಿದೆ. ಪ್ರತಿ ಅಧ್ಯಾಯಗಳಲ್ಲಿ ಸೂತ್ರವನ್ನು ಮೊದಲು ತಿಳಿಸಿ ನಂತರ ಉದಾಹರಣೆಯನ್ನು ನೀಡಲಾಗಿದೆ. ಪ್ರತೀ ಲೆಕ್ಕದ ಕೊನೆಯಲ್ಲಿ ವಿವರಣೆ ಸಹಿತ ಉತ್ತರ ಕೊಟ್ಟಿರುವುದನ್ನು ನಾವು ಗಮನಿಸಬಹುದು. ಇಲ್ಲಿ ಕೊಟ್ಟಿರುವ ಲೆಕ್ಕಗಳನ್ನು ನಮ್ಮ ದೈನಂದಿನ ವ್ಯವಹಾರದ ಅಥವ ನಿತ್ಯ ಚಟುವಟಿಕೆಯ ಮೇಲೆ ಹೆಣೆಯಲಾಗಿದೆ. ಈ ಪುಸ್ತಕವನ್ನು ಶತಮಾನಗಳಿಂದಲೂ ಹಲವಾರು ಪ್ರತಿಗಳನ್ನು ಮಾಡಿಸಿ, ಮಕ್ಕಳಿಗೆ ಗಣಿತ ಕಲಿಸಲು ಉಪಯೋಗಿಸುತಿದ್ದರು ಎಂದು ಹೇಳಲಾಗಿದೆ.

ವ್ಯವಹಾರ ಗಣಿತದ ಒಂದು ಸಾಲು ಹೀಗಿದೆ.
ಪಿರಿದಂ ಪೇಳ್ವೂಡೆ ಸಾಲದೆ |
ಪುರಾತನದ ಗಣಿತವೊಂದೆ ಪಲಕಾಲಂ ಬೆ ||
ಚ್ಚರಮೋದಿ ಕಿರಿದರಂ ವ್ಯವ
ಹರಿಸಲ್ ವ್ಯವಹಾರ ಗಣಿತಮಂ ವಿರಚಿಸಿದಂ ||
ಅರ್ಥ: ವಿಷಯವನ್ನು ವಿಸ್ತಾರವಾಗಿ ತಿಳಿಯಲು ಪುರಾತನರ ಗಣಿತ ಗ್ರಂಥವೇ ಸಾಕು. ಆದರೆ ಹಲವು ಸಲ ಬೇಗ
ಓದಲು ಹಾಗೂ ಸ್ವಲ್ಪದರಲ್ಲಿಯೇ ವ್ಯವಹಾರ ನಡೆಸಲು ಈ ವ್ಯವಹಾರ ಗಣಿತವನ್ನು ರಚಿಸಿರುವುದು.
ಈ ವ್ಯವಹಾರಗಣಿತದಲ್ಲಿ ಹಣವಿನಿಮಯ, ಅಳತೆ, ದೂರ ಮತ್ತು ಅದರ ಕೋಷ್ಟಕಗಳು, ಹಾಗೂ ತ್ರೈರಾಶಿಕಕ್ಕೆ ಸಂಬಂದಿಸಿದ್ದ ಲೆಕ್ಕಗಳಿವೆ. ತ್ರೈರಾಶಿಕದಲ್ಲಿ ಧಾನ್ಯಗಳ ಬೆಲೆ, ಅದರ ಅಳತೆ, ಅಡಿಕೆ ವ್ಯಾಪಾರ, ಕೂಲಿಗೆ ಸಂಬಂದಿಸಿದ್ದಂತಹ, ಧಾನ್ಯಗಳಲ್ಲಿ ಜಳ್ಳು ತೆಗೆದಾಗ ಉಳಿಯುವ ಶುದ್ಧಧಾನ್ಯಕ್ಕೆ ಸಂಬಂಧಿಸಿದ್ದ ಲೆಕ್ಕಗಳನ್ನು ಕಾಣಬಹುದು. ಶ್ರೀಗಂಧ, ಕುಂಕುಮ, ಅರಿಶಿನ, ಕಸ್ತೂರಿ ಹತ್ತಿ ಬೀಜ ಮುಂತಾದ ದಿನ ಬಳಕೆಯ ವಸ್ತುಗಳನ್ನು ಒಳಗೊಂಡ ಆಸಕ್ತಿದಾಯಕ ಲೆಕ್ಕಗಳನ್ನು ಕಾಣಬಹುದು. ಅದಲ್ಲದೆ ಹಣ ಬಳಸದೆ ವಸ್ತುಗಳನ್ನು ಕೊಟ್ಟು ವಸ್ತುಗಳನ್ನು ತೆಗೆದುಕೊಳ್ಳುವ ಲೆಕ್ಕಗಳನ್ನು ಗಮನಿಸಿದ ಅನುವಾದಕರು ರಾಜಾದಿತ್ಯನನ ಕಾಲದಲ್ಲಿ ವಿನಿಮಯ ಪದ್ದತ್ತಿ ಜಾರಿಯಲ್ಲಿದ್ದಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದರೊಟ್ಟಿಗೆ ಪಂಚರಾಶಿ, ಬೆಸ್ತರಾಶಿ, ಮಿಶ್ರ ತೈರಾಶಿಕ ಇವುಗಳಿಗೆ ಸಂಬಂಧಿಸಿದ ಬಡ್ಡಿ, ಕೂಲಿ, ಘನ ಅಳತೆ, ಜವಳಿ ವ್ಯಾಪಾರ, ಲಾಭ, ನಷ್ಟ, ಆನೆಯ ಕೂಲಿ, ಚಿನ್ನವನ್ನು ಪುಟವಿಡುವುದಕ್ಕೆ ಸಂಬಂಧಿಸಿದ ಲೆಕ್ಕಗಳನ್ನು ಸಹ ಕಾಣಬಹುದು.
ಗಮನಿಸಬಹುದಾದ ಮತ್ತೊಂದು ಸಂಗತಿ ಅಂದರೆ, ವ್ಯವಹಾರಗಣಿತದ ಪರಿಭಾಷಾ ಪ್ರಕರಣದಲ್ಲಿ 40 ಸ್ಥಾನ ಸಂಖ್ಯೆಗಳಿಗೆ ಹೆಸರುಗಳಿರುವುದು. ಎಕ್ಕಂ, ದಾಹಂ, ಶತಂ, ಸಾವಿರ, ದಾಸಾವಿರ, ಲಕ್ಷ, ದಾಲಕ್ಷ, ಕೋಟಿ, ದಾಕೋಟಿ, ಶತಕೋಟಿ, ಆರ್ಬುದ, ನೈರ್ಬುದ, ಖರ್ವ, ಮಹಾಖರ್ವ, ಪದ್ಮ, ಮಹಾಪದ್ಮ, ಕ್ಷೋಣಿ, ಮಹಾಕ್ಷೋಣಿ, ಶಂಖ, ಮಹಾಶಂಖ, ಕ್ಷಿತಿ, ಮಹಾಕ್ಷಿತಿ, ಕ್ಷೋಭ, ಮಹಾಕ್ಷೋಭ, ನದಿ, ಮಹಾನದಿ, ನಗ, ಮಹಾನಗ, ರಥ, ಮಹಾರಥ, ಹರಿ, ಮಹಾಹರಿ, ಫಣಿ, ಮಹಾಫಣಿ, ಕ್ರತು, ಮಹಾಕ್ರತು, ಸಾಗರ, ಮಹಾಸಾಗರ, ಪರಿಮಿತ, ಮಹಾಪರಿಮಿತ. ಅದಲ್ಲದೇ 0 ಇಂದ 9 ರವರೆಗಿನ ಸಂಖ್ಯೆಗಳಿಗೆ ಅನೇಕ ಪರ್ಯಾಯ ಹೆಸರುಗಳನ್ನು ನೀಡಲಾಗಿದೆ. ಕೂಡುವುದು, ಕಳೆಯುವುದು, ಗುಣಿಸುವುದು ಮತ್ತು ಭಾಗಿಸುವುದಕ್ಕ್ಕೂ ಸಹ ಅನೇಕ ಹೆಸರುಗಳನ್ನು ಇಲ್ಲಿ ಸೂಚಿಸಿದ್ದಾರೆ. ರಾಜದಿತ್ಯನು ತನ್ನ ಕೃತಿಯಲ್ಲಿ ಗಣಿತವನ್ನ ಪದ್ಯರೂಪದಲ್ಲಿ ಹೇಳಿದ್ದರೂ ಅದರ ವ್ಯಾಖ್ಯಾನವನ್ನು ಹಾಗೂ ಅದರ ವಿವರಣಿಯನ್ನು ಗದ್ಯರೂಪದಲ್ಲಿ ಕೊಟ್ಟಿರುವುದು ಗಮನಾರ್ಹ ಸಂಗತಿಯಾಗಿದೆ. ಕೋಷ್ಟಕಗಳನ್ನು ಹೇಳುವಾಗಲೂ ಕಂದ ಪದ್ಯಗಳನ್ನೇ ಬಳಸಿರುವುದು ಕಂಡುಬರುತ್ತದೆ. ಗದ್ಯಕ್ಕೆ ಹೋಲಿಸಿದರೆ ಪದ್ಯಗಳನ್ನು ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು, ಅದ್ದರಿಂದ ರಾಜಾದಿತ್ಯ ಹೆಚ್ಚಾಗಿ ಬಳಸಿದ್ದಿರಬಹುದು ಎಂಬುದು ಅನುವಾದಕರ ಅಭಿಪ್ರಾಯವಾಗಿದೆ.
ಹಲವಾರು ವೈವಿದ್ಯತೆಯಿಂದ ಕೂಡಿದ ಕನ್ನಡದ ಮೊಟ್ಟ ಮೊದಲ ಗಣಿತ ಕೃತಿ ರಾಜಾದಿತ್ಯನ ವ್ಯವಹಾರ ಗಣಿತವು ಕನ್ನಡದ ಮನೆಮನಗಳನ್ನು ತಲುಪಲಿ, ನಮ್ಮ ಮಕ್ಕಳೂ ಸಹ ಇದನ್ನು ಓದಲಿ. ಎಲ್ಲಾ ಕನ್ನಡಿಗರೂ ಓದುವಹಾಗೆ ಹಾಗೂ ಅನ್ಯಭಾಷೆಯವರೂ ಸಹ ಓದಿ ಅರ್ಥ ಮಾಡಿಕೊಳ್ಳುವ ಹಾಗೆ ಇಂಗ್ಲೀಷ್ ನಲ್ಲೂ ಸಹ ಅನುವಾದ ಮಾಡಿರುವ ಅನುವಾದಕರ ಶ್ರಮಕ್ಕೆ ಅನಂತ ಧನ್ಯವಾದಗಳು.
ಲೇಖಕರು ,
ಕೃಷ್ಣ ಚೈತನ್ಯ ,
ಗಣಿತ ಉಪನ್ಯಾಸಕರು,ತುರುವೇಕೆರೆ.
NEST PUBLICATIONS(R.)
Karnataka’s Best Publication for NEET and KCET Materials.
